ತಿಲೋತ್ತಮೆ
	ಒಬ್ಬ ಅಪ್ಸರೆ, ಕಶ್ಯಪನ ಮಗಳು, ಮಹಾಭಾರತ ಆದಿಪರ್ವದಲ್ಲಿ ಈಕೆಯ ತಾಯಿ ಅರಿಷ್ಟಯೆಂದೂ ಅನುಶಾಸನಪರ್ವದಲ್ಲಿ ಪ್ರಾಥೆಯೆಂದೂ ಹೇಳಲಾಗಿದೆ. ತಮ್ಮಿಂದಲ್ಲದೆ ಮತ್ತಾರಿಂದಲೂ ತಮಗೆ ಸಾವು ಬರದಂತೆ ಬ್ರಹ್ಮನಿಂದ ವರ ಪಡೆದು ಮದದಿಂದ ಸೊಕ್ಕಿ ದೇವತೆಗಳನ್ನು ಪೀಡಿಸುತ್ತಿದ್ದ ಸುಂದೋಪಸುಂದರೆಂಬ ರಾಕ್ಷಸ ಸೋದರರನ್ನು ಕೊಲ್ಲಿಸುವ ಉದ್ದೇಶದಿಂದ ವಿಶ್ವಕರ್ಮ ಈಕೆಯನ್ನು ಸೃಷ್ಟಿಸಿದ. ಉಳಿದ ಅಪ್ಸರೆಯರಿಗಿಂತ ಈಕೆ ತಿಲಾಂಶವಾದರೂ ಹೆಚ್ಚು ಸುಂದರಿಯಾಗಿದ್ದುದರಿಂದ ಈಕೆಗೆ ತಿಲೋತ್ತಮೆಯೆಂಬ ಹೆಸರು ಅನ್ವರ್ಥವಾಯಿತು. ಈಕೆಯ ರೂಪಶ್ರೀಯನ್ನು ಕಂಡು ಮೋಹಿತರಾದ ಸುಂದೋಪಸುಂದರಿಬ್ಬರೂ ಈಕೆಯನ್ನು ಮದುವೆಯಾಗ ಬಯಸಿದರು. ಅವರಲ್ಲಿ ಶೂರನಾದವನನ್ನು ತಾನು ವರಿಸುವುದಾಗಿ ತಿಲೋತ್ತಮೆ ತಿಳಿಸಿದಾಗ ಸೋದರರಿಬ್ಬರೂ ಸ್ಪರ್ಧಿಸಿ ಅಸುನೀಗಿದರು. 

	ಒಮ್ಮೆ ಚಂದ್ರನ ಬಳಿ ಹೋಗುತ್ತಿದ್ದ ತಿಲೋತ್ತಮೆಯನ್ನು ಸಾಹಸ್ರಿಕನೆಂಬಾತ ಬಲಾತ್ಕಾರದಿಂದ ತಡೆದು ಭೋಗಿಸಿದ. ಹತ್ತಿರದಲ್ಲೇ ದುರ್ವಾಸಮುನಿಯ ಆಶ್ರಮವಿತ್ತು. ಇವರ ಕ್ರೀಡೆಯಿಂದ ತಪ್ಪಸ್ಸಿಗೆ ಭಂಗವಾಗಲಾಗಿ ಕುಪಿತನಾದ ಮುನಿ ಇಬ್ಬರೂ ರಾಕ್ಷಸರಾಗಲೆಂದು ಶಪಿಸಿದ. ಮುಂದೆ ತಿಲೋತ್ತಮೆ ಬಾಣಾಸುರನ ಮಂತ್ರಿಯಾದ ಕುಂಭಾಡನಿಗೆ ಚಿತ್ರಲೇಖೆಯೆಂಬ ಮಗಳಾಗಿ ಜನಿಸಿ ಬಾಣಾಸುರನ ಮಗಳಾದ ಉಷೆ ಮತ್ತು ಅನಿರುದ್ಧರಿಗೆ ಮದುವೆಮಾಡಿಸಿ ತನಗೆ ಬಂದಿದ್ದ ರಾಕ್ಷಸ ಜನ್ಮವನ್ನು ತೊರೆದಳು. 

	ತನ್ನ ಪೂರ್ವಭವದಲ್ಲಿ ತಿಲೋತ್ತಮೆ ಬ್ರಾಹ್ಮಣಸ್ತ್ರೀಯಾಗಿದ್ದಳೆಂದೂ ಮಾಘ ಮಾಸದಲ್ಲಿ ಹುಟ್ಟಿದುದರಿಂದ ನಾಲ್ಕು ಸಾವಿರವರ್ಷ ವೈಕುಂಠದಲ್ಲಿದ್ದಳೆಂದೂ ಕಥೆ. 								(ಡಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ